ನವರಾತ್ರಿ ಬಂತು ಅಂದ್ರೆ ಬೆಂಗಳೂರು - ಮೈಸೂರಿನವರಿಗೆ ಮೊದಲು ಜ್ಞಾಪಕ ಬರುವುದು ಮಹಾರಾಜರ ದಸರಾ ಉತ್ಸವ ಮತ್ತು ಬೊಂಬೆ (ಗೊಂಬೆ) ಹಬ್ಬ.
ನವರಾತ್ರಿ ಹತ್ತು ದಿನಗಳ ಹಬ್ಬ. ಮಹಲಯ ಅಮಾವಾಸ್ಯೆಯಿಂದ ಶುರು ಆಗಿ ವಿಜಯದಶಮಿಯಂದು ಮುಗಿಯುತ್ತದೆ.
ಮಕ್ಕಳಿಗೆ ಆಗ ತಾನೆ ಪರೀಕ್ಷೆಗಳು ಮುಗಿದು ದಸರಾ ರಜೆ ಶುರುವಾಗಿರುತ್ತಿತ್ತು. ನವರಾತ್ರಿ ಶುರು ಆಗುವ ಒಂದು ವಾರದ ಹಿಂದಿಂದಲೂ ಬೊಂಬೆ ಇಡುವ ತಯಾರಿ ಶುರು ಆಗುತ್ತಿತ್ತು. ಮೊದಲು ಅಟ್ಟದಲ್ಲಿ ಜೋಪಾನವಾಗಿ ಇಟ್ಟಿದ್ದ ಬೊಂಬೆಗಳನ್ನು ಹುಷಾರಾಗಿ ತೆಗೆದು ದೂಳೊರೆಸುವುದು. ಹೆಚ್ಹು ಕಡಿಮೆ ಎಲ್ಲಾ ಮಣ್ಣಿನ ಮತ್ತು ಪಿಂಗಾಣಿ ಅಥವಾ ಮರದ ಬೊಂಬೆಗಳೇ ಇರುತ್ತಿತ್ತು. ಹಬ್ಬ ಶುರು ಅಗೋ ೨ -೩ ದಿನಗಳ ಮೊದಲು ಪಾರ್ಕ್ ಮಾಡಲು ಮಣ್ಣು ರೆಡಿಮಾಡಿ, ಜೊತೆಗೆ ಅದರಲ್ಲಿ ಬಗೆಬಗೆಯ ಕಾಳುಗಳನ್ನು ಉದುರಿಸಿ ಪೈರು ಬರುವಂತೆ ನೋಡಿಕೊಳ್ಳುತ್ತಿತ್ತು. ಮನೇಲಿ ಇದ್ದ ಮೇಜುಗಳು + ಹಳೆ ಡಬ್ಬ ಅಥವಾ ಟಿನ್ ಗಳು + ಮರದ ಹಲಗೆಗಳನ್ನು ಜೋಡಿಸಿ ಅದರಮೇಲೆ ಒಂದು ದುಪ್ಪಟಿಯನ್ನು ಹಾಸಿ ಬೊಂಬೆ ಇಡುತ್ತಿದ್ದೆವು. ಅದೆಷ್ಟು ರೀತಿಯ ಬೊಂಬೆಗಳು ಇರುತ್ತಿದ್ದವು. ರಾಮ-ಲಕ್ಷ್ಮಣ ಸೆಟ್, ದಶಾವತಾರ, ಮದುವೆ ಸೆಟ್, ಕೃಷ್ಣ, ಶೆಟ್ಟಮ್ಮ ಶೆಟ್ತಪ್ಪನ ಸೆಟ್, ಪ್ರಾಣಿಗಳು, ಕಪ್ಪೆ ಚಿಪ್ಪಿನವು, ಚೆನ್ನಪಟ್ಟಣದ ಸಾಮಾನುಗಳು, ಸಣ್ಣ ಸಣ್ಣ ಕಾರುಗಳು ಗಾಡಿಗಳು ಅನೇಕಾನೇಕ ಬೊಂಬೆಗಳು.
ಮಹಾಲಯ ಅಮಾವಾಸ್ಯೆ ಅಂದ್ರೆ ನವರಾತ್ರಿಯ ಮೊದಲ ದಿನ ಅಮ್ಮ ಮುಖ್ಯವಾದ ಪಟ್ಟದ ಬೊಂಬೆಗಳನ್ನ ಕಳಶದ ಜೊತೆ ಇತ್ತು ಪೂಜೆ ಮಾಡುವರು. ದಿನ ಸಂಜೆ ನಾವೆಲ್ಲ ಮಕ್ಕಳು, ಅಂದ್ರೆ ಹೆಚ್ಚು ಕಡಿಮೆ ನಮ್ಮ ಬೀದಿಯ ಮಕ್ಕಳೆಲ್ಲ ...ಎಲ್ಲರ ಮನೆಗೆ ಹೋಗಿ ಬೊಂಬೆನೋಡಿಕೊಂಡು ಬರ್ತಾ ಇದ್ವಿ. ತರತರಹದ ಬೊಂಬೆಗಳು ಮತ್ತು ಪ್ರತಿ ಮನೆಯಲ್ಲೂ ಕೊಡುತಿದ್ದ ಬೊಂಬೆ ಬಾಗನ (ಚರುಪು) ತುಂಬ ಚೆನ್ನಾಗಿರುತ್ತಿತ್ತು. ಹತ್ತು ದಿನಗಳು ತರತರಹದ ತಿಂಡಿಗಳು. ಸಂಭ್ರಮದ ದಿನಗಳು ಅವು.
ಈಗಲೂ ನಮ್ಮ ಮನೆ ಅಟ್ಟದಲ್ಲಿ ಅದೇ ಬೊಂಬೆಗಳು ಇವೆ. showcase ನಲ್ಲಿ ಅಥವಾ ದೇವರಮನೆಯಲ್ಲಿ ಪಟ್ಟದ ಬೊಂಬೆಗಳನ್ನ ಇಟ್ತು ಪೂಜೆ ಮಾಡ್ತೀವಿ. ಮೊದಲಿನ ಹಾಗೆ ಬೊಂಬೆಗಳನ್ನ ತೆಗೆದು ಜೋಡಿಸುವ ಗೊಜಿಗೆಹೊಗುವುದಿಲ್ಲ ಯಾಕಂದ್ರೆ ಅವುಗಳನ್ನ ನೋಡಕ್ಕೆ ಯಾವ ಮಕ್ಕಳೂ ಮನೆಗೆ ಬರುವುದಿಲ್ಲ. ನೋಡಕ್ಕೆ ಯಾರು ಇಲ್ಲದಿದ್ದ ಮೇಲೆ ಇಟ್ತು ತಾನೆ ಏನು ಪ್ರಯೋಜನ?
ಅದಷ್ಟೇ ಅಲ್ಲ. ಅಷ್ಟೆಲ್ಲಾ ಮಾಡೋ ಅಷ್ಟು ಪುರುಸೊತ್ತು ಸಹ ಇಲ್ಲ. :( ನಾವೆಲ್ಲರೂ ನಮ್ಮ ನಮ್ಮ ಫಾಸ್ಟ್ ಲೈಫ್ ಅನ್ನೋ ಪ್ರಪಂಚದಲ್ಲಿ ಕಳೆದುಹೊಗಿದ್ದೇವಿ.
Wednesday, July 30, 2008
Subscribe to:
Posts (Atom)