Sunday, November 22, 2009

ಪುಸ್ತಕ ಮೇಳ



ನಮ್ಮ ಮನೆಯಲ್ಲಿ ದೊಡ್ಡ ಪುಸ್ತಕ ಭಂಡಾರೆವೆ ಇದೆ. ನಮ್ಮ ತಂದೆ ಹಾಗು ತಾತ ಸಂಗ್ರಹಿಸಿರುವ ಪುಸ್ತಕಗಳು. ಎಲ್ಲ ರೀತಿಯ ಕನ್ನಡ ಪುಸ್ತಕಗಳು ಇವೆ. ರಾಮಾಯಣ, ಮಹಾಭಾರತ, ಭಾಗವತ, ಕಥೆ, ಕಾದಂಬರಿಗಳು, ಐತಿಹಾಸಿಕ ಪುಸ್ತಕಗಳು, ಸ್ವತಂತ್ರ ಹೋರಾಟದ ಪುಸ್ತಕಗಳು, ಮಕ್ಕಳ ಅಮರ ಚಿತ್ರ ಕಥಾ, ಬಾಲಮಂಗಳ, ಬಾಲಮಿತ್ರ, ಚಂದಮಾಮ, ದಿನಕೊಂದು ಕಥೆ, ಹೇಗೆ ಹಲವರು ಬಗೆಯ ಪುಸ್ತಕಗಳು ಇವೆ. ನನಗೂ ಸಹ ಪುಸ್ತಕಗಳೆಂದರೆ ತುಂಬಾ ಇಷ್ಟ. ಎಂತಹ ಪುಸ್ತಕವನ್ನಾದರೂ ಓದುತ್ತೇನೆ. ಆದ್ರೆ ನನ್ನ ತಮ್ಮ ಸಣ್ಣ ಕಥೆ, ಕಾಮಿಕ್ಸ್ ಅಥವಾ ಜೋಕ್ಸ್ ಓದುತ್ತಾನೆ ಜೊತೆಗೆ ದಿನಪತ್ರಿಕೆಯನ್ನು ತಪ್ಪದೆ ಓದುತ್ತಾನೆ.

ನಾನು ಮೊನ್ನೆ ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ Auto Expo ಮತ್ತು ಪುಸ್ತಕ ಮೇಳಕ್ಕೆ ನನ್ನ ತಮ್ಮ ನ ಜೊತೆ ಹೋಗಿದ್ದೆ. ನನ್ನ ತಮ್ಮಗೆ ಇಷ್ಟವಿದ್ದಿದ್ದು ಬರಿ ಆಟೋ expo ಆದ್ರೆ ನನಗೆ ಬೇಕಿದ್ದಿದ್ದು ಪುಸ್ತಕ ಮೇಳ.

ಮೊದಲು Auto Expo ಗೆ ಹೋದೆವು. Entrance fee Rs.50, ಆದ್ರೆ ಟಿಕೆಟ್ ಸುಲಭವಾಗಿ ಸಿಕ್ಕಿತು. ಅಲ್ಲಿ ತರಾವರಿ ಕಾರುಗಳು ಹಾಗು ಮೋಟಾರ್ ಬೈಕ್ ಗಳು. ಎಲ್ಲ ಕಂಪೆನಿಗಳ ಕಾರ್ ಗಳು ಇದ್ದವು. Tata, Hundai, Maruti, Skoda, Mahindra, BMW, ಮತ್ತಿತರ ಕಾರ್ ಗಳು ಇದ್ದವು. ಕ್ಯಾಮೆರಾ ತೆಗೆದುಕೊಂಡು ಹೋಗಿದ್ದೇವೆ, ಎಲ್ಲ ಕಾರು ಗಳ ಜೊತೆ ನನ್ನ ತಮ್ಮನ ವಿವಿಧ ಭಂಗಿಗಳು ಫೋಟೋ ತೆಗೆದೆನು. ತುಂಬಾ ಜನ ಬಂದಿದ್ದರು. ಎಲ್ಲರು ಸಹ ಕ್ಯಾಮೆರಾ ತಂದು ಫೋಟೋಗಳನ್ನು ತೆಗೆದುಕೊಳ್ಳುತಿದ್ದರೆ ಹೊರತು ಯಾರು ಸಹ ಕಾರ್ ಕೊಂಡುಕೊಳ್ಳುವ ಬಗ್ಗೆ ವಿಚಾರಿಸುತ್ತಿರಲಿಲ್ಲ .ನಾವು ಹೋಗಿ ಅರ್ಧ ಘಂಟೆಗೆಲ್ಲ ಪೂರ್ತಿ ನೋಡಿದ್ದು ಮುಗಿಯಿತು.

ಅಲ್ಲಿಂದ ಮುಂದೆ ನಾವು ಪುಸ್ತಕ ಮೇಳಕ್ಕೆ ಬಂದೆವು. ಇಲ್ಲಿ Entrance fee Rs.20. ಉದ್ದನೆಯ ಕ್ಯೂ ಇತ್ತು. ಕ್ಯೂ ನಲ್ಲಿ ನಿಂತು ಸುತ್ತ ಮುತ್ತ ಜನರನ್ನು ನೋಡುತ್ತಿದ್ದೆ. ನಾನು ಸುಮಾರು ವರ್ಷಗಳು ಹಿಂದೆ ಪುಸ್ತಕ ಮೇಳಕ್ಕೆ ಹೋಗಿದ್ದ ನೆನಪು. ಆಗೆಲ್ಲ ಕಡೆಮೆ ಜನ ಬರುತ್ತಿದ್ದರು. ಆದರೆ ಇಲ್ಲಿ ನೆರೆದಿದ್ದ ಜನರನ್ನು ನೋಡಿ ಆಶ್ಚರ್ಯವಾಯಿತು ನನಗೆ. ಸಿಕ್ಕಾಪಟ್ಟೆ ಜನ, ಕಡಲೆಕಾಯಿ ಪರುಷೆಯಲ್ಲಿ ಇದ್ದಂತೆ ಇದ್ದರು. ಒಂದು ಗಮನಿಸಬೇಕಾದಂತಹ ವಿಷಯವೆಂದರೆ ಹೊರಗೆ ಬರುತ್ತಿದ್ದ ಪ್ರತಿಯೊಬ್ಬರ ಕೈಯಲ್ಲೂ ಪುಸ್ತಕಗಳು ಇದ್ದವು. ನನ್ನ ತಮ್ಮನಿಗೆ ಇಲ್ಲಿ ಬರಲು ಸ್ವಲ್ಪವು ಮನಸ್ಸಿರಲಿಲ್ಲ. ಎಳೆದುಕೊಂಡು ಒಳಗೆ ಹೋದೆ ನಾನು. ಅಲ್ಲಿ ಸುಮಾರು ೩೦೦ ಪುಸ್ತಕದ ಅಂಗಡಿಗಳು ಇದ್ದವು. ನಾನು ಕಂಡಂತೆ ಪ್ರತಿಯೊಂದು ಮಳಿಗೆಯಲ್ಲಿ ತುಂಬಾ ಜನ ತುಂಬಿದ್ದರು. ಪುಸ್ತಕ ನೋಡಲು ಸಹ ನೂಕುನುಗ್ಗಲು. ಎಲ್ಲ ರೀತಿಯ ಪುಸ್ತಕಗಳು ನೋಡ ಸಿಕ್ಕಿತು - ಕನ್ನಡ, ಇಂಗ್ಲಿಷ್, ತಮಿಳು, ತೆಲುಗು, ಉರ್ದು. ಹೋಗುವುದೇ ಬೇಡವೆನ್ನುತಿದ್ದ ನನ್ನ ತಮ್ಮನೇ, ಪುಸ್ತಕಗಳನ್ನು ಹುಡುಕಿ ಹುಡುಕಿ ತೆಗೆದುಕೊಂಡ. ಅಂದರೆ ಅಲ್ಲಿ ಹತ್ತು ಹಲವು ರೀತಿಯ ಪುಸ್ತಕಗಳು ಸಿಕ್ಕವು, ಬರೀ ಕಥೆ ಕಾದಂಬರಿಗಳಲ್ಲ. ಎಂಥವರು ಸಹ ಒಂದಲ್ಲ ಒಂದು ಪುಸ್ತಕವನ್ನು ಕೊಂಡುಕೊಳ್ಳಲೆ ಬೇಕು, ಹಾಗಿತ್ತು ಅಲ್ಲಿನ ಪರಿಸರ.

ಪುಸ್ತಕ ಮೇಳ ವನ್ನು ನೋಡಿ ಬಹಳ ಸಂತೋಷವಾಯಿತು. ಎಲ್ಲಿ ನೋಡಿದರೂ ಪುಸ್ತಕ!! ಎಲ್ಲರು ಕೈಯಲ್ಲೂ ಪುಸ್ತಕ!! ಕೆಲವು ವರ್ಷಗಳ ಹಿಂದೆ, ಕನ್ನಡ ಪುಸ್ತಕ ಪ್ರಕಾಶಕರು ನಮ್ಮಲ್ಲಿ ಪುಸ್ತಕ ಓದುವವರು ಕಡಿಮೆಯಾಗಿ, ಕೊಂಡುಕೊಳ್ಳುವವರು ಯಾರು ಇಲ್ಲ ಎಂದು ಪೇಚಾಡುತಿದ್ದರು. ಆದರೆ ಇಲ್ಲಿ ಹೋಗಿಬಂದ ಮೇಲೆ ಅನಿಸುತ್ತಿದೆ ಜನ ಬದಲಾಗಿದ್ದಾರೆ ಎಂದು, ಜನ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುತ್ತಾರೆ.