Tuesday, September 1, 2009

IT ಜೀವನ



ನಮ್ಮ ತಂದೆ ಅಥವಾ ತಾತನ ಕಾಲದಲ್ಲಿ ಕೆಲಸ ಅಂದ್ರೆ ಸ್ಕೂಲ್ ಮೇಷ್ಟ್ರು, govt ಆಫೀಸು ಪೋಸ್ಟ್ ಆಫೀಸು, KEB, Water supply, ಹೀಗೆ ಕೇಳಿಬರುತ್ತಿತ್ತು. ಕಳೆದ ಎರಡು ದಶಕಗಳಿಂದ ಎಲ್ಲಿ ನೋಡಿದ್ರು ಬರಿ IT/BT ಕಂಪೆನಿಗಳ ಹೆಸರೇ ಕೇಳಿಬರುತ್ತೆ.

ಎಲ್ಲ ಕಡೆ ಇಂಜಿನಿಯರಿಂಗ್ ಕಾಲೇಜುಗಳು ನಾಯಿಕೊಡೆಗಳಂತೆ ತಲೆ ಎತ್ತಿ ನಿಂತಿವೆ ಜೊತೆಗೆ ನಾನಾ ರೀತಿಯ ಸಾಫ್ಟವೇರ್ ಟ್ರೈನಿಂಗ್ ಸೆಂಟರ್ ಗಳು. ಕೋರ್ಸ್ ಮುಗಿದ ನಂತರ ಕೆಲಸ ಕೊಡಿಸುವ ಆಶ್ವಾಸನೆ. ಇದಕ್ಕಾಗಿ ಜನರು ಕೇಳಿದಷ್ಟು ದುಡ್ಡು ಸುರಿದು ಮುಗಿಬಿದ್ದು ಸೇರುತ್ತಿದ್ದಾರೆ. ಒಂದು ಒಳ್ಳೆ
ಸಾಫ್ಟವೇರ್ ಕಂಪನಿಯಲ್ಲಿ ಕೆಲಸ ಸಿಕ್ಕಿಬಿಟ್ಟರಂತೂ, ಜೀವನದ ಬಹುದೊಡ್ಡ ಸಾಧನೆ.

ಕೆಲಸ ಸಿಕ್ಕಿ ಸೇರೋತನಕ ಎಲ್ಲ ಚೆನ್ನಾಗೇ ಇರುತ್ತೆ. ಸೇರಿದ ಮೇಲೆ ಈ IT ಲೋಕದ ನಿಜ ಪರಿಚಯವಾಗುತ್ತದೆ. ಸಂಪಾದನೆಯ ವಿಷಯ ಬಿಟ್ಟರೆ,
ಇನ್ನೇನು ಸುಖ ಇರೋಲ್ಲ. ಸಂಪದಿಸಿದ್ದನ್ನು ಖರ್ಚುಮಾಡುವುದಕ್ಕೂ ಸಹ ಪುರೋಸೋತ್ತು ಇರುವುದಿಲ್ಲ. ನಮ್ಮ ಮನೆ ಒಂದು ದಿಕ್ಕಾದರೆ, ಆಫೀಸು
ಮತ್ತೊಂದು ದಿಕ್ಕು ಇರುತ್ತೆ. ಆಫೀಸಿನಲ್ಲಿ ದಿನ ಮೀಟಿಂಗ್ಸ್, ಕ್ಲೈಂಟ್ ಕಾಲ್ಸ್ ಮತ್ತು ಸಿಕ್ಕಾಪಟ್ಟೆ ಕೆಲಸ. ಹೆಸರಿಗೆ ೯ - ೬ ಕೆಲಸ. ಆದರೆ ಮುಂಜಾನೆ ಮನೆಯಿಂದ ಹೊರಟರೆ, ಹೊತ್ತು ಮುಳುಗಿದ ಮೇಲೋ ಇಲ್ಲಾ ರಾತ್ರಿಗೆ ಮನೆ ಸೇರೋದು. ಒಮ್ಮೊಮ್ಮೆ ಅಂತು ಮಧ್ಯ ರಾತ್ರಿ.

ಅಷ್ಟೇ ಅಲ್ಲ, ಈಗಂತೂ ಎಲ್ಲಾ ಕಡೆಗಳಿಂದ ಜನ ವಲಸೆ ಬರುತ್ತಾ ಇದ್ದಾರೆ, competition ಜಾಸ್ತಿ. ಎಷ್ಟು ಓದಿದರು ಸಾಲದು. ನಮ್ಮ ಮಾರ್ಕೆಟ್ ವ್ಯಾಲ್ಯೂ ಹೆಚ್ಚಿಸಿಕೊಳ್ಳಲು ಯಾವಾಗಲು ಏನರ ಒಂದು ಓದುತ್ತಾನೆ ಇರಬೇಕು. ಸಾಲದಕ್ಕೆ ಎಲ್ಲಾ ಕಡೆ ಬೇರೆ ಕಡೆಯಿಂದ ಬಂದ ಜನರ ಸಿಕ್ಕಾಪಟ್ಟೆ ರಾಜಕೀಯ, ಗುಂಪುಗಾರಿಕೆ. ಇವರುಗಳ ಮಧ್ಯೆ ನಾವು ಬದುಕಬೇಕು. ನಾವು ಎಷ್ಟೇ ನೀತಿ ನಿಜಾಯಿತಿಯಿಂದ ಕೆಲಸ ಮಾಡಿದರೂ ಸಹ, ಪ್ರಮೋಷನ್ ಸಿಗೋದು ತುಂಬಾ ಕಷ್ಟ. ದಿನ ನಮ್ಮ ಜೀವನ ಒಂದು ರೀತಿಯ ಹೋರಾಟ.

ಏನಪ್ಪಾ ಇದು ಬರೀ -ve ವಿಷಯಗಳನ್ನೇ ಪಟ್ಟಿ ಮಾಡ್ತಾ ಇದ್ದೀನಿ ಅಂತ ಅನ್ನಿಸ್ತ ಇದೆ. ಎಲ್ಲರು +ve ಹೇಳಿ -ve ಗೆ ಬರುತ್ತಾರೆ. ನಾನು ಉಲ್ಟಾ ಬರ್ತಾ ಇದ್ದೀನಿ.

ಸಾಫ್ಟವೇರ್ ಕಂಪನಿ ಸೇರೋದರಿಂದ ಆಗೋ ಲಾಭಗಳು ಏನು ಕಡಿಮೆ ಇಲ್ಲಾ. ಸಂಪಾದನೆ ತುಂಬಾ ಚೆನ್ನಾಗಿರುತ್ತೆ, ದೇಶಗಳನ್ನು ಸುತ್ತಬಹುದು,ಮನೆ ಮತ್ತು ಕಾರ್ ತೊಗೊಬಹುದು. ಕಂಡಿದ್ದೆಲ್ಲ ತೊಗೊಬಹುದು. ಅನೇಕ ರೀತಿಯ ಜನಗಳ ಪರಿಚಯವಾಗುತ್ತದೆ. ಒಂದು ರೀತಿಯ Hi-Fi ಜೀವನ.

ನಿಧಾನವಾಗಿ ಕೂತು ಯೋಚಿಸಿದರೆ, ನಮ್ಮ ಜೀವನ ಎತ್ತ ಸಾಗುತ್ತಿದೆ ಅಂತಾನೆ ಗೊತ್ತಾಗ್ತಾ ಇಲ್ಲ. ಮೊದಲಾದರೆ ಯಾವುದೇ ಕೆಲಸದಲ್ಲಿ ಇದ್ದರು ಸಹ
೯ - ೫ ಕೆಲಸ ಮಾಡಿ ಮನೆಗೆ ಹಿಂತಿರುಗುತ್ತಿದ್ದರು. ಮನೆ ಮಕ್ಕಳು ಸಂಸಾರ ಅಂತ ಸಂತೋಷವಾಗಿ ಇರುತ್ತಾ ಇದ್ದರು. ಸಂಪಾದನೆ ಹೆಚ್ಚಿಲ್ಲದಿದ್ದರೂ
ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಸಣ್ಣ ಪುಟ್ಟ ಉಳಿತಾಯ ಸಹ ಮಾಡುತ್ತಿದ್ದರು. ಪುಸ್ತಕಗಳನ್ನು ಓದಿ ಜ್ಞಾನಾರ್ಜನೆ ಮಾಡಿಕೊಳ್ಳುತಿದ್ದರು. ಚೆನ್ನಾಗಿತ್ತು ಆ ದಿನಗಳು. ಸಂಬಳ ಬಂದ ದಿನ ಸಾಮನ್ಯವಾಗಿ ಮನೆಯವರನ್ನೆಲ್ಲ ಹೋಟೆಲ್ ಗೆ ಕರೆದುಕೊಂಡು ಹೋಗಿ ತಿಂಡಿ ಕೊಡಿಸುತ್ತಿದ್ದರು.
ಆದರೆ ಈಗ, ಯಾವುದಕ್ಕೂ ಪುರುಸೊತ್ತಿಲ್ಲ, ಸಮಯವಿಲ್ಲ. ಬರಿ ಸಂಪಾದನೆಯೇ ಗುರಿಯಾಗಿ ಹೋಗಿದೆ.

ಬೇಕಾ ಈ ಜೀವನ? ಏನು ಸಾಧಿಸ್ತೀವಿ ಹೀಗೆ ?
ದ್ವಂದ್ವದ ಪ್ರಶ್ನೆ ಇದು. ಒಂದು ರೀತಿ ನೋಡಿದ್ರೆ, ಈಗಿನ ಕಾಲದಲ್ಲಿ ಎಲ್ಲರಂತೆ ನಾವು ಇರಕ್ಕೆ ಈ ಕೆಲಸ ಬೇಕು, ಆದ್ರೆ ಎಲ್ಲೋ ಒಂದು ಕಡೆ ಅನ್ನಿಸುತ್ತೆ, ನಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಾ ಇದ್ದಿವೇನೋ ಅಂತ.

"ಹಿಂದುರುಗಿ ಹೋಗಲಾರೆನು, ಮುಂದಡಿ ಇಡಲಾರೆನು". ಇದು ನಮ್ಮ ಮನಸ್ಥಿತಿ.