Thursday, April 29, 2010

ನಿದ್ದೆ!!

"ಚಿಂತೆ ಇಲ್ಲದವನಿಗೆ ಸಂತೇಲು ನಿದ್ದೆ ಅಂತ ಗಾದೆ ಮಾತು ಕೇಳಿದ್ದೀನಿ" ಆದ್ರೆ ಇದು ನನ್ನ ವಿಚಾರದಲ್ಲಿ ಸುಳ್ಳು ಅನ್ಸುತ್ತೆ. ಎಲ್ಲ ಕಾಲಗಳಲ್ಲೂ, ಎಷ್ಟೇ ಕಷ್ಟ ಇರಲಿ, ಚಿಂತೆ ಇರಲಿ, ನಿದ್ದೆಗೆ ಮಾತ್ರ ಯಾವತ್ತು ತಾಪತ್ರಯ ಆಗಿಲ್ಲ.

ದಿನ ರಾತ್ರಿ ಮಲಗೋ ಮೊದಲು ಬೆಳಿಗ್ಗೆ ಬೇಗ ಎದ್ದು ಉದ್ಯಾನವನದಲ್ಲಿ ನಡೆಯಲು ಹೋಗಬೇಕು ಅಂತ ಅಂದುಕೊಂಡು ಮಲಗುತ್ತೇನೆ. ಆದರೆ ಬೆಳಗಾಗೋದೇ ಗೊತ್ತಾಗಲ್ಲ. ಗೊತ್ತಾದ್ರೂ ಅಲಾರ್ಮ್ ಆರಿಸಿ ಮತ್ತೆ ನಿದ್ದೆ!! ಏನಾರ ಬೆಳಿಗ್ಗೆ ಬೇಗ ಆಫೀಸಿಗೆ ಹೋಗ್ಬೇಕು ಅಂದ್ರೆ ನಿದ್ದೆಯಿಂದಾಗಿ ರಜ ಹಾಕೋಣ ಅನ್ನಿಸುತ್ತೆ. ಎಷ್ಟೋ ಸರ್ತಿ ನಿದ್ದೆ ಗೋಸ್ಕರ ಸ್ಕೂಲ್, ಕಾಲೇಜು ಆಫೀಸ್ ಗೆ ರಜ ಹಾಕಿದ್ದಿದೆ. ಹಾಕಿ ಮನೇಲಿ ಬೈಸಿಕೊಂಡಿದ್ದಿದೆ :) ಇದೊಂದೇ ಅಲ್ಲ, ನನಗೆ ಸಿಕ್ಕಾಪಟ್ಟೆ ಕೋಪ ಬಂದಾಗ, ನಿದ್ದೆ ಕೂಡ ಜೊತೆಗೆ ಬರುತ್ತೆ. ನಿದ್ದೆ ಮಾಡಿ ಎದ್ದರೆ, ಕೋಪ ಹೋಗಿರುತ್ತೆ, ಎಲ್ಲ ಮತ್ತೆ ನಾರ್ಮಲ್, ಒಂದುತರಹ ಕೂಲಿಂಗ್ ಎಫೆಕ್ಟ್ ನನ್ನ ತಲೆಗೆ ಅದು.

ಹೆಚ್ಚು ಕಡಿಮೆ ಎಲ್ಲರ ಕಥೇನೂ ಇದೆ ಅನ್ಸುತ್ತೆ. ಆಫೀಸ್ನಲ್ಲಿ ನಿದ್ದೆ, ಬಸ್ ನಲ್ಲಿ ನಿದ್ದೆ, ತಿಂಡಿ ನಿದ್ದೆ, ಕಾಫಿ ನಿದ್ದೆ, ಹೀಗೆ ಎಷ್ಟೋ ರೀತಿಯ ನಿದ್ದೆಗಳು. ನಮ್ಮ ದೇವೇಗೌಡರು ಎಲ್ಲ ವೇದಿಕೆಗಳ ಮೇಲೆ ಕೂತು ನಿದ್ದೆ ಮಾಡ್ತಾ ಇರ್ತಾರೆ. ಇನ್ನೊಂದು ಮರ್ತಿದ್ದೆ - ದೋಸೆ ನಿದ್ದೆ. ಇದು ಎಲ್ಲರಿಗು ಪರಿಚಯ ಅನ್ಸುತ್ತೆ. ದೋಸೆ ತಿಂದ ಸ್ವಲ್ಪ ಹೊತ್ತಿಗೆ ನಿದ್ದೆ ಶುರು ಆಗುತ್ತೆ. ಅಯ್ಯೋ, ಇನ್ನು ಎಷ್ಟೊಂದು ಮರೆತಿದ್ದೀನಿ - ಶಾಲಾ ಕಾಲೇಜಿನಲ್ಲಿ ಪಾಠ ಕೇಳ್ತಾ ನಿದ್ದೆ, ಆಫೀಸ್ ನಲ್ಲಿ ಕೆಲಸ ಮಾಡ್ತಾ ತೂಕಡಿಸೋದು, ಇನ್ನು ಓದಕ್ಕೆ ಕೂತರಂತು ಸಿಕ್ಕಾಪಟ್ಟೆ ನಿದ್ದೆ. ಎಲ್ಲ ವಿಧ್ಯಾರ್ಥಿಗಳಿಗೂ ಇದು ತಾಪತ್ರಯನೇ.

ಇನ್ನ ಕೆಲವರು ಇದ್ದಾರೆ. ಅವರಿಗೆ ಏನು ಮಾಡಿದರೂ ನಿದ್ದೆ ಬರಲ್ಲ. ಏನೆಲ್ಲಾ ಕಷ್ಟ ಪಡುತ್ತಾರೆ ನಿದ್ದೆ ಮಾಡಕ್ಕೆ. ನಿದ್ರೆ ಮಾತ್ರೆ ತೊಗೋತಾರೆ, ಧ್ಯಾನ ಮಾಡ್ತಾರೆ, ವ್ಯಾಯಾಮ ಮಾಡ್ತಾರೆ ..ಹೀಗೆ ..ಏನೇನೋ. ದೇವರು ಯಾಕೆ ಹೀಗೆ ಮಾಡ್ತಾರೋ? ನಿದ್ದೆ ಬೇಕು ಅನ್ನುವವರಿಗೆ ನಿದ್ದೆ ಕೊಡಲ್ಲ. ಬೇಡ ಅನ್ನುವವರಿಗೆ ಸಿಕ್ಕಾಪಟ್ಟೆ ನಿದ್ದೆ ಬರುತ್ತೆ. ವಿಚಿತ್ರ ಅಲ್ಲವೆ ಜೀವನ?

ನೋಡಿ ಈಗ ಈ ಬ್ಲಾಗ್ ಬರೀತಾ ಇದ್ರೂನೂ ಸಿಕ್ಕಾಪಟ್ಟೆ ಕಣ್ಣು ಎಳಿತಾ ಇದೆ. ನಿದ್ದೆ ಬರ್ತಾ ಇದೆ zzzzzzz

No comments: