Wednesday, January 2, 2008

ಕಾಲಚಕ್ರ

ಮುಂಜಾನೆಯ ಸವಿ ಸಮಯದಲಿ, ಉದಯಿಸುವನು ರವಿ
ಮನೆಮನವ ಬೆಳಕಾಗಿಸಿ ಹೊಸಕಳೆಯನು ತರುವನು
ಜಗವೆಲ್ಲ ನಗುವುದು ಅವನ ನಗುವಿನಲಿ
ತೇಲಿಹೋಗುವರು ಅವನ ಮುಗ್ಧತೆಯ ಮೋಡಿಯಲಿ.

ಅವನ ತುಂಟಾಟ ನೋಡಿ ನಕ್ಕು ನಲಿವರು ಎಲ್ಲರು
ಮುತ್ತಿನ ಮಳೆಗೆರೆದು ಮುದ್ದಿಸುವರು ಎಲ್ಲರು
ಮಾಡಿದ್ದೆಲ್ಲವ ಸಹಿಸಿ ಸರಿ ಎನ್ನುವರು ಎಲ್ಲರು
ತಪ್ಪು ಹೆಜ್ಜೆಗಳ ನೋಡಿ ಕೇಕೇಹಾಕುವ ಮೂಢರು.

ಪ್ರಖರವಾದ ನೇಸರ ನೆತ್ತಿಯ ಮೇಲೆ ಬಂದಿಹನು
ಕ್ಷಣಿಕ ಲೋಭಕ್ಕೆ ಮರುಳಾಗಿ ನಂಬಿದವರ ಮರೆವನು
ತಾನು ನಡೆವ ಹಾದಿಯೇ ಸರಿ ಎಂದು ವಾದಿಸುವನು
ತನ್ನಂತೆ ಬೇರಾರಿಲ್ಲವೆಂದು ಮೆರೆವನು.

ಯೌವನದ ಬೇಗೆಯಲಿ ಅರಿವಿಲ್ಲದೆ ಬೇಯುತಿಹನು
ಸರಿತಪ್ಪುಗಳ ಅರಿವಿಲ್ಲದೆ, ಯಾರನ್ನೂ ನಂಬದೇ ಸಾಗುತಿಹನು
ಬಿಸಿರಕುತದ ಮದದಿಂದ, ಅರೆವಿಧ್ಯೆಯ ದೆಸೆಯಿಂದ ಎಡವುತಿಹನು
ಎಡವಿದರೂ ಇಲ್ಲವೆಂದು ತನಗೆ ತಾನೆ ಮೋಸ ಮಾಡಿಕೊಳ್ಳುತಿಹನು.

ಮುಸ್ಸಂಜೆಯ ತಂಗಾಳಿಯ ತಂಪಾದ ಸಮಯದಲಿ
ಗತ ಜೀವನದ ನೆನಪುಗಳ ಮೆಲಕುಹಾಕುವ ಕಾಲದಲಿ
ನಡೆದು ಬಂದ ಹಾದಿಯನು ತಿರುಗಿ ನೋಡುವ ಬಯಕೆ
ಹೆದರಿಸುವವು ಮುಗಿಸಲಾಗದ ತಪ್ಪುಒಪ್ಪುಗಳ ಎಣಿಕೆ.

ಮರೆತುಹೋದ ಸಂಬಂಧಗಳು ನೆನಪಾಗುವವು ಅವನಿಗೆ
ವ್ಯಥೆಪಟ್ಟರೂ ಮರುಕಳಿಸದು ಮುಗ್ಧತೆಯ ಆ ಸವಿಗಳಿಗೆ
ಗೊತ್ತುಗುರಿಯಿಲ್ಲದ ಹಾದಿಯನು ಸವೆದಿರುವನು
ಗಾಣದೆತ್ತಿನ ಸಮಾನವಾಗಿ ಜೀವಿಸುತ್ತಿರುವನು.

ಮುಸ್ಸಂಜೆಯ ಮಂಬೆಳಕು ಸರಿದು ಗಾಡ ಕತ್ತಲೆಯಾವರಿಸಿದೆ
ಕತ್ತಲೆಯಲಿ ಬೆಳಕಿಗಾಗಿ ತಡಕಾಡುತ್ತಿರುವನು
ಜೀವನದೋಟವ ಮುಗಿಸಿ ಕತ್ತಲೆಯಲಿ ಕರಗಿಹೋಗುವನು
ಜೀವನಚಕ್ರದ ಸುಳಿಯಲಿ ಸಿಕ್ಕಿ ಮಣ್ಣಾಗುವನು.

ರಾತ್ರಿಯ ಕತ್ತಲೆ ಸರಿದು ಮತ್ತೆ ಬೆಳಕು ಮೂಡುವುದು
ಕತ್ತಲು ಬೆಳಕಿನೊಡನೆ ಕಾಲಚಕ್ರ ಆಟವಾಡುವುದು
ಹುಟ್ಟುಸಾವುಗಳು ಕಾಲಚಕ್ರದ ಅಡಿಯಲ್ಲಿ ಸಿಕ್ಕಿರುವುದು
ಏನಾದರೇನು ಕಾಲಚಕ್ರ ಮಾತ್ರ ನಿಲ್ಲದೆ ತಿರುಗುತಿಹುದು.

ಬದಲಿಸಿಕೊಳ್ಳಬೇಕು ಮನುಜನು ತನ್ನ ನೀತಿಯನು
ನಾಲ್ಕುಗಳಿಗೆಯ ಬದುಕಿನಲಿ ಸಮರಸದಿ ಬಾಳಬೇಕು
ಮರೆಯಬೇಕು ದ್ವೇಷಾಸೂಯೆಗಳ, ಅಹಂಭಾವ ಅಹಂಕಾರಗಳ
ಬದುಕಬೇಕು ಎಲ್ಲರೊಂದಿಗೆ ನಿರ್ಮಲ ನಿಸ್ವಾರ್ಥ ಪ್ರೀತಿಯಲಿ.

No comments: