Wednesday, January 2, 2008

ಮುರಳಿಗಾನ

ಕಾವೇರಿಯ ತೀರದಲಿ ಮೋಹಕ ಮುರಳಿಯ ನಾದದಲಿ
ತೇಲಿಹೋದೆನು ನಾನು, ನಿನ್ನನರಸುತ ಕಳೆದುಹೋದೆನು ನಾನು.

ಅಲೆಗಳ ಭೋರ್ಗರೆತದ ನಡುವೆ ಕೇಳಿತು ಮುರಳಿಗಾನವು
ಕದಡಿತು ಮನವ, ಕರೆದೊಯ್ದಿತು ಸವಿನೆನಪುಗಳ ಲೋಕದೊಳು.
ನಿದಿರಾದೇವಿಯ ಮರೆತು ಸವಿದೆನು ಮುರಳಿಯ ಗಾನಸುಧೆಯ
ಎಷ್ಟು ಸವಿದರೂ ತಣಿಸದು ನನ್ನ ದಾಹವ ನಿತ್ಯ ನಿರಂತರ ಮುರಳಿಗಾನವು.

ಕಡುಗತ್ತಲ ರಾತ್ರಿಯಲಿ ಗಿಡಮರಗಳ ನಡುವೆ ಕೇಳಿತು ಮುರಳಿಗಾನವು
ಕಾತರಿಸಿದೆ ನಿನ್ನ ಸಮೀಪಿಸಲು, ಚಂದ್ರನನುಸರಿಸುವ ಮೋಡದಂತೆ
ನಾದಕ್ಕೆ ತಲೆಬಾಗಿದೆ ನಾಗಿಣಿಯಂತೆ, ಮನಸೋತು ನಾದದೊಳೊಂದಾದೆ.
ಹೂವ ಕೆಣಕುವ ದುಂಬಿಯಂತೆ, ಕಿವಿಯಲ್ಲಿ ಝೇಂಕರಿಸಿತು ಮುರಳಿಗಾನವು.

ತೀರ ಬೇರಾದರೇನು, ನಿನ್ನ ಮನವ ಪರಿಚಯಿಸಿತು ಮುರಳಿಗಾನವು
ನಮ್ಮ ಸುಂದರ ಬದುಕಿಗೆ ಮಂಗಳ ನಾದವಾಯಿತು ಮುರಳಿಗಾನವು.

No comments: