Wednesday, January 2, 2008

ಮುಸ್ಸಂಜೆ

ಮುಸ್ಸಂಜೆಯ ಹೊಂಬೆಳಕಿನಲ್ಲಿ ಮಾಮರದ ನೆರಳಲ್ಲಿ
ನೀ ಬರುವೆಯೆಂದು ಕಾದೆನು ಗೆಳೆಯ, ಸಮಯದರಿವಿಲ್ಲದೆ ಕಾದೆನು.

ಆಹಾರ ಹುಡುಕಿ ಹೊರಟಿದ್ದ ಹಕ್ಕಿಗಳು ಮರಳಿದವು ಗೂಡಿಗೆ
ಉದಯಿಸಿದ್ದ ರವಿಯು ಮುಳುಗಿ ಶಶಿ ಮೂಡಿ ಬರುತ್ತಿರುವನು
ಪ್ರಕೃತಿಯೇ ನಿದ್ರಿಸಲನುವಾಗುತ್ತಿರುವಾಗ ನಾನೊಬ್ಬಳು ಮಾತ್ರ
ಇದಾವುದರ ಪರಿವಿಲ್ಲದೆ ಕಾದಿರುವೆನು ಗೆಳೆಯ ನಿನಗಾಗಿ, ನಿನ್ನ ಆಗಮನಕ್ಕಾಗಿ.

ಮಾಮರದ ಕೋಗಿಲೆಯು ಕೂಗುತ್ತಿಲ್ಲ ತನ್ನ ಸಂಗಾತಿ ಜೊತೆಗಿದೆಯೆಂದೇನೋ
ಮಲ್ಲಿಗೆಯ ಸುಗಂಧವು ಪಸರಿಸಿದೆ ಗಾಳಿಯಲ್ಲಿ,ನನ್ನಲ್ಲಿರುವ ನಿನ್ನ ಸವಿನೆನಪಿನಂತೆ
ಕೃಷ್ಣನಿಗೆ ಕಾದ ರಾಧೆಯೇ ಧನ್ಯಳು ಅವನ ದರ್ಶನವನ್ನಾದರೂ ಪಡೆದೆಳು
ನೀ ಎಂದು ಬರುವೆ ಗೆಳೆಯ? ನಾ ರಾಧೆಯಾದರೆ ನೀ ಕೃಷ್ಣನಾಗಲಾರೆಯಾ.

ಮುಸ್ಸಂಜೆಯ ಹೊಂಬೆಳಕು ಕರಗಿ ಕತ್ತಲೆಯಲ್ಲಿ ಪ್ರಕೃತಿಯು ಕ್ರೂರವಾಗಿ ತಲೆಯೆತ್ತಿನಿಂತಿದೆ
ನೀ ಬರುವೆಯೆಂದು ಕಾಯುತ್ತಿರುವೆನು ಗೆಳೆಯ, ಸಮಯದರಿವಿಲ್ಲದೆ ಕಾಯುತ್ತಿರುವೆನು.

No comments: