Wednesday, January 2, 2008

ಯಾರಿವಳು?

(This poem was written on a beautiful pencil sketch of a girl done by a friend of mine. )

ಯಾರಿವಳು? ಯಾರಿವಳು? ಕಣ್ಮನ ತಣಿಸುವ
ಮುದ್ದನು ಬರಿಸುವ ಚಂದದ ಚೆಲುವೆ ಯಾರಿವಳು?

ಬಿಡುವಿನಲ್ಲಿ ಬ್ರಹ್ಮ ಬರೆದ ಬೊಂಬೆ ಇವಳು
ಶಾರದೆಯ ಮರೆತು ಕನಸಿನಲ್ಲಿ ಕಂಡ ಗೊಂಬೆ ಇವಳು
ಮಾರನಿಗೆ ರತಿಯ ಮರೆಸುವ ಚೆಲುವೆ ಇವಳು
ರಾಧೆಯ ಮರೆಯಿಸಿ ಕೃಷ್ಣನ ಸೆಳೆಯುವ ಸುಕೋಮಲೆ ಇವಳು.

ಯಾರಿವಳು? ಯಾರಿವಳು? ಹುಣ್ಣಿಮೆ ಚಂದ್ರನ
ಕಾಂತಿಯ ಹೊಂದಿದ ರೂಪಸಿ ರಮಣಿ ಯಾರಿವಳು?

ಇಂದ್ರ ಧನಸ್ಸನು ನಾಚಿಸುವ ಕಂಗಳ ಒಡತಿ ಇವಳು
ಸುಂದರ ಜೇನೊಸರುವ ಕೆಂದುಟಿಯ ಜವ್ವನಿ ಇವಳು
ಬಯಕೆಯ ಅಲೆಗಳ ಹೋಡೆದೆಬ್ಬಿಸುವ ಸುಳಿಗಾಳಿ ಇವಳು
ವಾತ್ಸಾಯನನ ಕನಸಿನ ಚಿರಯೌವನೆ ಇವಳು.

ಯಾರಿವಳು? ಯಾರಿವಳು? ಜಗವನೆ ಮರೆತು
ಜಗವನೆ ಸೆಳೆಯುವ ಮೋಹಕ ಮಾಯೆ ಯಾರಿವಳು?

ಇಂದ್ರಲೋಕದ ಅಪರೂಪದ ಅಪ್ಸರೆ ಇವಳು
ಸುರಾಸುರರೂ ಬಯಸುವ ಗಂಧರ್ವಕನ್ಯೆ ಇವಳು
ಕಾಳಿದಾಸನ ಕಾವ್ಯ ಶಾಕುಂತಲೆ ಇವಳು
ಜಕಣನ ನಯನ ಮನೋಹರ ಶಿಲಾಬಾಲಿಕೆ ಇವಳು.

ಯಾರಿವಳು? ಯಾರಿವಳು? ಮುಗ್ಧತೆಯೇ ಮೂರ್ತಿ-
ವೆತ್ತಂತಿರುವ ಅಮೃತಮೂರ್ತಿ ಯಾರಿವಳು?

ಭುವಿಭಾರ ಹೊತ್ತಿರುವ ಭೂತಾಯಿಯ ಮಗಳಿವಳು
ಕಾರ್ಮೋಡದ ಅರಿವಿಲ್ಲದ ಸುಕುಮಾರಿ ಇವಳು
ಕ್ರೂರಮೃಗಗಳ ಅರಿವಿಲ್ಲದ ಮುಗ್ಧಳಿವಳು
ಬೇಡನ ಸುಳಿವರಿಯದ ಹಾರಾಡುವ ಹಕ್ಕಿ ಇವಳು.

1 comment:

ಯುವಪ್ರೇಮಿ said...

ಬಹಳ ಸುಂದರವಾಗಿದೆ ನಿಮ್ಮ ಈ ಕವನ.

ಓದುತಿದ್ದಂತೆ ನೀವು ದ್ರಿಷ್ಟಿಸಿ ನೋಡಿದ ಚಿತ್ರ ನನ್ನ ಕಣ್ಣ ಮುಂದೆಯೇ ಬಂದತೆ ಅಯ್ತು ನಮಗೆ. :-)

ನಿಮ್ಮ ಎಲ್ಲ ಕವನಗಳ ಮೆಲಕು ಹಾಕುತ್ತ, ಅಬಾ, ಇದನ್ನು ನಾನು ಇಷ್ಟು ದಿವಸ ನೋಡಿಯೆ ಇರಲಿಲ್ಲವಲ್ಲ ಅನ್ನಿಸಿತು.

ಮತ್ತೊಮ್ಮೆ, ನಿಮ್ಮ ಕವನಗಳು ಅತಿ ಸುಂದರವಾಗಿವೆ.

-ಯುವಪ್ರೇಮಿ