Wednesday, January 2, 2008

ಪ್ರಕೃತಿ

ಮಧು ತುಂಬಿದ ಹೂವು
ಮದವೇರಿದ ದುಂಬಿ
ಮದದಿಂದ ಮಧು ಹೀರಿ
ಮಧುರಾನುಭೂತಿಯ ಪಡೆಯಿತು
ದುಂಬಿ ಬಾಡಿಸಿತು ಹೂವು.

ಮಾಮರದ ಮಾಗಿದ ಮಾವು
ಅದ ಹುಡುಕಿ ಹಾರಿತು ಗಿಣಿಯು
ಮರವೇರಿ ಮುತ್ತಿತು ಮಾವನು
ಕ್ಷಣದಲಿ ಸವಿಯಿತು ಗಿಣಿಯು
ಮಾಗಿದ ಮಾವಿನಹಣ್ಣನು.

ಮಳೆ ತುಂಬಿದ ಮೋಡ
ಮೈಸುಡುವ ನೇಸರ
ತನ್ನ ಪ್ರಖರತೆಯ ಬೀರಿ
ತುಂಬಿದ ದೇಹದ ಮೋಡವ
ಕರಗಿಸಿ ಮಳೆಯಾಗಿಸಿತು.

ಮುಗಿಲ ನಿರ್ಮಲ ಬಿಳುಪು
ಕತ್ತಲ ಕಾಮುಕ ಕಪ್ಪು
ಬಿಳುಪನಾವರಿಸಿತು ಕಪ್ಪು
ಕದಡಿತದರ ನಿರ್ಮಲತೆಯ
ಮೂಡಿಸಿತು ಅಳಿಸಲಾರದ ಛಾಪು.

ಹುಡುಕಹೊರಟಿತು ಹೊಸಹೂವನು ದುಂಬಿ
ತಣಿಯದೇನೋ ಒಂದರಿಂದದರ ದಾಹ
ಪಡೆಯಹೊರಟಿತು ಹೊಸ ಮಾವನು ಗಿಣಿಯು
ತಣಿಯದೇನೋ ಒಂದರಿಂದದರ ಹಸಿವು.

ಚದುರಹೊರಟಿತು ಹೊಸ ಮೋಡವ ನೇಸರ
ಅಳಿಸಲನೇಕ ಮೋಡಗಳ
ಕದಡಹೊರಟಿತು ಬಿಳಿಬಣ್ಣವ ಕರಿಯು
ಮತ್ತೆ ಕದಡಲದರ ನಿರ್ಮಲತೆಯ.

ಬಾಡಬೇಕೆ ಹೂವು? ಕೊಳೆಯಬೇಕೆ ಮಾವು?
ಕರಗಬೇಕೆ ಮೋಡ? ಕೆಡಬೇಕೆ ಬಿಳುಪು?
ಇದ ನೋಡಿ ರೋಸಿಹೋಗದೇ ಭೂತಾಯಿಯ ಮನವು
ಈ ನೀತಿಯ ಬದಲಿಸಲಾರಳೇ ಅವಳು?

No comments: