Wednesday, January 2, 2008

ಗೆಳೆತನ

ಅಂದಿನ ಗೆಳೆತನದ ನೆನಪುಗಳು ಹಚ್ಚ ಹಸಿರಾಗಿದೆ ಮನದಲ್ಲಿ
ಮರೆತಿಲ್ಲ ನಿನ್ನ ಗೆಳೆಯ, ನೀ ಇರುವೆ ನನ್ನ ಹೃದಯಮಂದಿರದಲ್ಲಿ.

ಪ್ರತಿದಿನವು ಶಾಲೆಗೆ ಜೊತೆಯಾಗಿ ನಡೆದುಹೋಗುತ್ತಿದ್ದೆವು
ತಂದ ತಿಂಡಿಯ ಹಂಚಿ ತಿನ್ನುತ್ತಿದ್ದೆವು
ಸಂಜೆಗತ್ತಲಾದರೂ ತೋಟದಲ್ಲಿ ಜೊತೆಯಾಗಿ ಆಡುತ್ತಿದ್ದೆವು
ಒಮ್ಮೆಯಾದರೂ ಒಬ್ಬರನ್ನೊಬ್ಬರು ನೋಡದೆ ಇರುತ್ತಿರಲ್ಲಿಲ್ಲವಲ್ಲವೆ ಗೆಳೆಯಾ?

ಮುಂದಿನ ಶಿಕ್ಷಣಕ್ಕಾಗಿ ಇಬ್ಬರೂ ಬೇರೆ ಬೇರೆ ಊರು ಸೇರಿದೆವು
ಆದರೂ ಪತ್ರ ಮುಖೇನ ಸಂಪರ್ಕಿಸುತ್ತಿದ್ದೆವು.
ವಾರಕ್ಕೊಮ್ಮೆ ಬರುತ್ತಿದ್ದ ನಿನ್ನ ಪತ್ರಗಳು ತಿಂಗಳಿಗೊಂದಾಯಿತು,
ಕ್ರಮೇಣ ನಿಂತೇಹೋಯಿತು
ಯಾಕೆ ಗೆಳೆಯ, ಹೊಸ ಗೆಳೆಯರ ಸಮೂಹದಲ್ಲಿ ನಿನ್ನ
ಪ್ರೇಮದ ಗೆಳೆತಿಯ ಮರೆತೆಯಾ?

ಅಂದು ನಾವು ನೆಟ್ಟು ನೀರೆರೆದ ಸಸಿಗಳು ಬೆಳೆದು ಹೆಮ್ಮರವಾಗಿವೆ
ಆದರೆ ನಮ್ಮ ಗೆಳೆತನವು ಮಾತ್ರ ನೀರಿಲ್ಲದೆ ಸೊರಗಿಹೋಗಿದೆ
ಯಾರಿಗೆ ಹೋಲಿಸುವುದು ನಮ್ಮ ಗೆಳೆತನವ, ದ್ರುಪದ-ದ್ರೋಣರಿಗೊ
ಅಥವ ಕೃಷ್ಣ-ಕುಚೇಲರಿಗೊ?
ಒಡೆದ ಕನ್ನಡಿಯಂತಾಗಿದೆ ನಮ್ಮ ಸ್ನೇಹ, ಚೂರುಗಳನ್ನು ಬಿಸಾಡಬಹುದೇ
ಹೊರತು ಸೇರಿಸಲಾಗದು.

ಇಂದು ನೀ ಎಲ್ಲಿರುವೆ ಎಂದು ತಿಳಿಯದು, ಏನಾಗಿರುವೆ ಎಂದೂ ತಿಳಿಯದು
ಆದರೂ ನಿನ್ನ ಕಾಣಬೇಕೆಂಬ ಪರಿತಪನೆ ನನಗೆ ಗೆಳೆಯಾ
ನನ್ನ ಕಾಡುವ ನಿನ್ನ ನೆನಪುಗಳಂತೆ, ನಿನಗೆಂದೂ ನಾ
ನೆನಪಾಗುವುದಿಲ್ಲವೇ ಗೆಳೆಯಾ?
ನೀ ನನ್ನ ಮರೆತರೇನಂತೆ, ಎಂದಿಗೂ ನಾ ನಿನ್ನ ಒಳಿತನ್ನೇ ಬಯಸುವವಳು.

ಅಂದಿನ ಗೆಳೆತನದ ನೆನಪುಗಳು ಹಚ್ಚ ಹಸಿರಾಗಿದೆ ಮನದಲ್ಲಿ
ಮರೆತಿಲ್ಲ ನಿನ್ನ ಗೆಳೆಯ, ನೀ ಇರುವೆ ನನ್ನ ಹೃದಯಮಂದಿರದಲ್ಲಿ.

No comments: